ನಮ್ಮ ಸ್ಮಾರಕದ ಬಗ್ಗೆ
ಏಕೆ ನಮ್ಮ ಸ್ಮಾರಕ?
ನಮ್ಮ ಸ್ಮಾರಕವು ಕರ್ನಾಟಕದ ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು “ಸ್ಮಾರಕವನ್ನು ದತ್ತು ಪಡೆದುಕೊಳ್ಳಿ” ಯೋಜನೆಯಡಿಯ ಒಂದು ಉಪಕ್ರಮವಾಗಿದೆ. ಈ ಉಪಕ್ರಮವು “ಒಂದು ರಾಜ್ಯ, ಅನೇಕ ಜಗತ್ತುಗಳು” ಎಂದು ಸಾರುವ ರಾಜ್ಯದ ಬ್ರಾಂಡ್ ಭರವಸೆಗೆ ಸೂಕ್ತವಾಗಿ ಹೊಂದಿಕೊಳ್ಳುವ ರೀತಿಯಲ್ಲಿ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಎತ್ತಿ ತೋರಿಸುವ ಗುರಿಯನ್ನು ಹೊಂದಿದೆ. 4 ಯುನೆಸ್ಕೋ ತಾಣಗಳು, 844 ರಾಜ್ಯ-ಸಂರಕ್ಷಿತ ಸ್ಮಾರಕಗಳು ಮತ್ತು 500 ಕ್ಕೂ ಹೆಚ್ಚು ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ) ಸಂರಕ್ಷಿತ ಸ್ಮಾರಕಗಳನ್ನು ಹೊಂದಿರುವ ಕರ್ನಾಟಕವು ನಿಜವಾಗಿಯೂ “ಒಂದು ರಾಜ್ಯ, ಅನೇಕ ಸ್ಮಾರಕಗಳು” ಅನುಭವವನ್ನು ನೀಡುತ್ತದೆ.
ಪ್ರಸ್ತುತ, ಕರ್ನಾಟಕವು ಪ್ರತಿ ವರ್ಷ ಸುಮಾರು 23 ಕೋಟಿ ದೇಶೀಯ ಪ್ರವಾಸಿಗರನ್ನು ಮತ್ತು 6 ಲಕ್ಷಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ನಮ್ಮ ಸ್ಮಾರಕ ಉಪಕ್ರಮವು, ಪ್ರವಾಸಿಗರ ಈ ಸಂಖ್ಯೆಯನ್ನು ಹೆಚ್ಚಿಸುವಲ್ಲಿ, ಹೆಚ್ಚಿನ ಸ್ಥಳೀಯ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಹಾಗೂ ಸ್ಥಳೀಯ ಹಾಗೂ ರಾಜ್ಯದ ಆರ್ಥಿಕ ವಹಿವಾಟನ್ನು ಹೆಚ್ಚಿಸುವಲ್ಲಿ ಸಹಕರಿಸುತ್ತದೆ.
ನಮ್ಮ ಸ್ಮಾರಕದ ದೂರದೃಷ್ಟಿತ್ವ
ಕರ್ನಾಟಕ ಸರ್ಕಾರದ ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ (DAMH), ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ (DoT) ಮತ್ತು ಸಂಬಂಧಿತ ಖಾಸಗಿ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳ ನಿಕಟ ಸಹಯೋಗದೊಂದಿಗೆ, ಪಾರಂಪರಿಕ ಸ್ಮಾರಕಗಳನ್ನು ರಕ್ಷಿಸುವ ಹಾಗೂ ಸಂರಕ್ಷಿಸುವ ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ (DAMH) ನ ಪ್ರಯತ್ನಗಳಿಗೆ ಪೂರಕವಾಗುವ / ಸುಸ್ಥಿರಗೊಳಿಸುವ ರೀತಿಯಲ್ಲಿ ಕರ್ನಾಟಕದ ಪಾರಂಪರಿಕ ಸ್ಮಾರಕಗಳಲ್ಲಿ ಮೂಲಭೂತ ಸೌಲಭ್ಯಗಳು ಮತ್ತು ಆಧುನಿಕ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿರುತ್ತದೆ. ಇದು ಯೋಜಿತ ರೀತಿಯಲ್ಲಿ ಹಾಗೂ ಹಂತಹಂತವಾಗಿ ಪ್ರವಾಸಿ ಅನುಭವವನ್ನು ಹೆಚ್ಚಿಸುವ ಮೂಲಕ ಸ್ಮಾರಕ ತಾಣದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ನಮ್ಮ ಸ್ಮಾರಕದ ಉದ್ದೇಶ
ಈ ಯೋಜನೆಯು ಲಾಭರಹಿತ ಸಂಸ್ಥೆಗಳು (non-profit organizations), ಸರ್ಕಾರೇತರ ಸಂಸ್ಥೆ (NGO) ಗಳು, ಕಾರ್ಪೊರೇಟ್ (corporates) ಗಳು, ಸಿರಿವಂತರು (high-net-worth individuals (HNIs)) ಮತ್ತು ಇತರೇ ವ್ಯಕ್ತಿಗಳಿಗೆ ರಾಜ್ಯ-ಸಂರಕ್ಷಿತ ಸ್ಮಾರಕಗಳಲ್ಲಿ ಮೂಲಭೂತ ಸೌಲಭ್ಯಗಳು ಮತ್ತು ಆಧುನಿಕ ಸೌಕರ್ಯಗಳನ್ನು ಸುಧಾರಿಸುವ ಗುರಿಯೊಂದಿಗೆ ‘ಸ್ಮಾರಕವನ್ನು ದತ್ತು ತೆಗೆದುಕೊಳ್ಳುವ’ ಅವಕಾಶ ನೀಡುತ್ತದೆ, ಆ ಮೂಲಕ ಒಟ್ಟಾರೆ ಪ್ರವಾಸಿಗರ ಅನುಭವವನ್ನು ಹೆಚ್ಚಿಸಲು ಅನುಕೂಲ ಮಾಡಿಕೊಡುತ್ತದೆ. ವಿವಿಧ ಪಾಲುದಾರರೊಂದಿಗೆ ಸಮಾಲೋಚಿಸಿದ ನಂತರ, ಚಟುವಟಿಕೆಗಳನ್ನು ಪರಿಸರ, ಸಾಮಾಜಿಕ ಮತ್ತು ಆಡಳಿತ (ESG) ಮಾರ್ಗಸೂಚಿಗಳೊಂದಿಗೆ ಸಾಮ್ಯಗೊಳಿಸಲು ನಿರ್ಧರಿಸಲಾಗಿದೆ.
ಕರ್ನಾಟಕದ ಪಾರಂಪರಿಕ ಸ್ಮಾರಕಗಳನ್ನು ಸಂರಕ್ಷಿಸಿ ಮತ್ತು ರಕ್ಷಿಸಿ.
- ಕರ್ನಾಟಕದ ಪಾರಂಪರಿಕ ಸ್ಮಾರಕಗಳಲ್ಲಿ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಮೂಲಭೂತ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು.
- ಪಾರಂಪರಿಕ ಸ್ಮಾರಕ ತಾಣಗಳಲ್ಲಿ ಪ್ರವಾಸಿ ಅನುಭವವನ್ನು ಸುಧಾರಿಸಲು, ಅಗತ್ಯ ಸೌಲಭ್ಯಗಳು ಮತ್ತು ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು.
- ರಾಜ್ಯದ ಸಾಂಸ್ಕೃತಿಕ ಮತ್ತು ಪಾರಂಪರಿಕ ಮೌಲ್ಯಗಳನ್ನು ಉತ್ತೇಜಿಸಿ ಮತ್ತು ರಾಜ್ಯದಲ್ಲಿನ ಪಾರಂಪರಿಕ ಸ್ಮಾರಕಗಳ ತಾಣಗಳ ಬಗ್ಗೆ ಜಾಗೃತಿ ಮೂಡಿಸಲು ಮಾರ್ಗಗಳನ್ನು ಅಭಿವೃದ್ಧಿಪಡಿಸುವುದು.
- ಸುಸ್ಥಿರ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು ಮತ್ತು ಉತ್ತೇಜಿಸುವುದು ಹಾಗೂ ಅವುಗಳ ಸರಿಯಾದ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವುದು.
- ಪಾರಂಪರಿಕ ಸ್ಮಾರಕ ತಾಣಗಳ ಸುತ್ತಮುತ್ತಲಿನ ಸ್ಥಳೀಯ ಸಮುದಾಯಗಳ ಜೀವನೋಪಾಯವನ್ನು ಬೆಂಬಲಿಸುವುದು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು.
