ನಾಗಾವಿ ವಿಶ್ವವಿದ್ಯಾನಿಲಯದ ಇತಿಹಾಸ ಮತ್ತು ಗುರುತಿನ ಕುರಿತು ವಿಮರ್ಶೆ ವರದಿ
ಕಲಬುರಗಿ ಜಿಲ್ಲೆಯು ಅನೇಕ ಮಹಾನ್ ವಿಷಯಗಳೊಂದಿಗೆ ಅದ್ಭುತ ಇತಿಹಾಸವನ್ನು ಹೊಂದಿದೆ. ಜಿಲ್ಲೆಯ ಸನ್ನತಿಯು ಕ್ರಿಸ್ತಪೂರ್ವ 3 ನೇ ಶತಮಾನದಿಂದ ಪ್ರಸಿದ್ಧ ಬೌದ್ಧ ಕೇಂದ್ರವಾಗಿತ್ತು. ಭಾರತದಲ್ಲಿ ಕಂಡುಬರುವ ಮೌರ್ಯ ಚಕ್ರವರ್ತಿ ಅಶೋಕನ 2 ಪ್ರಮುಖ ಶಿಲಾ ಶಾಸನಗಳಲ್ಲಿ ಒಂದು ಸನ್ನತಿಯಲ್ಲಿದೆ. ಅದೇ ರೀತಿ, ತನ್ನ ಸಂಗಾತಿಗಳ ಜೊತೆಯಿರುವ ಅಶೋಕನ ಭಾವಚಿತ್ರವಿರುವ ‘ರಾಯೋ ಅಶೋಕ’ ಎಂಬ ಹೆಸರಿನ ಭಾರತದ ಏಕೈಕ ಶಾಸನವು ಸನ್ನತಿಯ ಸಮೀಪದ ಕನಗನಹಳ್ಳಿ ಗ್ರಾಮದಲ್ಲಿದೆ. ಕ್ರಿ.ಪೂ 1 ನೇ ಶತಮಾನದಿಂದ ಕ್ರಿ.ಶ 1 ನೇ ಶತಮಾನವರೆಗೆ ಇಲ್ಲಿ ಬೌದ್ಧ ಸ್ತೂಪವನ್ನು ನಿರ್ಮಿಸಲಾಯಿತು ಮತ್ತು ಆ ಅವಧಿಯಲ್ಲಿ ಕಲಬುರಗಿ ಜಿಲ್ಲೆಯು ಪ್ರಸಿದ್ಧ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಭಾರತದ ನಾನಾ ಭಾಗಗಳಿಂದ ವ್ಯಾಪಾರಸ್ಥರು ಬಂದು ಈ ಬೌದ್ಧ ಸ್ತೂಪಕ್ಕೆ ದೇಣಿಗೆ ನೀಡುತ್ತಿದ್ದರೆಂದು ಕಂಗನಹಳ್ಳಿ ಸ್ತೂಪ ಶಾಸನಗಳಿಂದ ತಿಳಿದುಬರುತ್ತದೆ. ಕ್ರಿ.ಶ.1ನೇ ಶತಮಾನದ ವೇಳೆಗೆ ಜೈನ ಧರ್ಮದ ಶಾಖೆಗಳಲ್ಲಿ ಒಂದಾದ ಶ್ವೇತಾಂಬರ ಪಂಥ ಕಲಬುರಗಿ ಜಿಲ್ಲೆಯನ್ನು ಪ್ರವೇಶಿಸಿತ್ತು.
ಶಾತವಾಹನರು, ಬಾದಾಮಿ ಚಾಲುಕ್ಯರ ಆಳ್ವಿಕೆಯಲ್ಲಿ ಕಲಬುರ್ಗಿ ಜಿಲ್ಲೆ ಪ್ರಮುಖ ಆಡಳಿತ ಘಟಕವಾಗಿತ್ತು. ರಾಷ್ಟ್ರಕೂಟ ರಾಜ ಮುಮ್ಮಡಿ ಗೋವಿಂದನು ಮಾನ್ಯಖೇಟವನ್ನು ತನ್ನ ರಾಜಧಾನಿಯನ್ನಾಗಿ ಮಾಡಿದ ನಂತರ, ಇದು ರಾಷ್ಟ್ರಕೂಟ ರಾಜವಂಶದ ಪ್ರಮುಖ ಸ್ಥಳವಾಯಿತು. ರಾಷ್ಟ್ರಕೂಟರ ನಂತರ ಅಧಿಕಾರಕ್ಕೆ ಬಂದ ಕಲ್ಯಾಣ ಚಾಲುಕ್ಯರು ಕಲಬುರಗಿ ಜಿಲ್ಲೆಯನ್ನು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕೇಂದ್ರವನ್ನಾಗಿ ಮಾಡಿದರು. ಕಲ್ಯಾಣ ಚಾಲುಕ್ಯರು ಮತ್ತು ಅವರ ಸಾಮಂತರು, ಅಧಿಕಾರಿಗಳು ಕಲಬುರಗಿ ಜಿಲ್ಲೆಯಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸಿದರು, ಅವುಗಳಲ್ಲಿ ಚಿತ್ತಾಪುರ ತಾಲೂಕಿನ ನಾಗಾವಿ 10-13 ನೇ ಶತಮಾನದಲ್ಲಿ ವಿಶ್ವವಿಖ್ಯಾತ ವಿಶ್ವವಿದ್ಯಾನಿಲಯವಾಗಿತ್ತು.
ನಾಗಾವಿ:
ನಾಗಾವಿಯು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿದೆ. ಈ ಗ್ರಾಮವು ಪ್ರಸ್ತುತ ಎಲ್ಲಮ್ಮ ದೇವಿಯ ಆರಾಧನೆಗೆ ಪ್ರಸಿದ್ಧವಾಗಿದ್ದರೂ, ಇದು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ನಾಗಾವಿಯಲ್ಲಿ ದೊರೆತ ಕಲ್ಯಾಣ ಚಾಲುಕ್ಯರ ಶಾಸನಗಳಲ್ಲಿ ಈ ಸ್ಥಳವನ್ನು ಮಹಾ ಅಗ್ರಹಾರ ನಾಗಾವಿ, ಸರ್ವ ನಮಸ್ಯ ಅಗ್ರಹಾರ ನಾಗಾವಿ, ಅಗ್ರಹಾರ ನಾಗಾವಿ ಎಂದು ಕರೆಯಲಾಗಿದೆ. ಮುಂದುವರೆದು, ಕ್ರಿ.ಶ. 1058 ರ ಶಾಸನವು ನಾಗಾವಿಯು ಅಭಿನವ ಬ್ರಹ್ಮಲೋಕ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕುಂತಲನಾಡಿಗೆ ತಿಲಕಪ್ರಾಯವಾಗಿತ್ತು ಮತ್ತು ವಿದ್ಯಾವಂತರೆಂದು ಹೆಸರುಗಳಿಸಿದ್ದಂತಹ ವೈದಿಕ ಬ್ರಾಹ್ಮಣರನ್ನು ಒಳಗೊಂಡಿತ್ತು ಎಂದು ಉಲ್ಲೇಖಿಸಿರುತ್ತದೆ. ಶಾಸನಗಳಲ್ಲಿ, ಈ ಗ್ರಾಮವನ್ನು ನಾಗವಿ, ನಾಗವಾಪಿ, ನಾಗೈ ಎಂದು ಕರೆಯಲಾಗಿರುತ್ತದೆ. ‘ನಾಗಾ’ ಎಂಬ ಪೂರ್ವಪ್ರತ್ಯಯ ಪದವು ನಾಗಾರಾಧನೆಯನ್ನು ಸೂಚಿಸಿದರೆ, ‘ವಾಪಿ’ ಎಂಬ ಪದವು ‘ಬಾವಿ’ ಎಂಬ ಅರ್ಥದ ಸಂಸ್ಕೃತ ಪದವಾಗಿರುತ್ತದೆ. ಶ್ರೀನಿವಾಸ್ ಎಂಬ ವಿದ್ವಾಂಸರು 1920 ರಲ್ಲಿ ಸಮೀಕ್ಷೆಗಾಗಿ ಈ ಸ್ಥಳಕ್ಕೆ ಭೇಟಿ ನೀಡಿದಾಗ, ಅಲ್ಲಿ ಹಲವಾರು ನಾಗ ಶಿಲ್ಪಗಳು ಇರುವುದನ್ನು ಗಮನಿಸಿರುತ್ತಾರೆ. ಪ್ರಾಯಶಃ ಪ್ರಾಚೀನ ಕಾಲದಿಂದಲೂ ನಾಗಾವಿಯ ಬಾವಿಯ ಬಳಿ ಇರುವ ನಾಗರ ಶಿಲ್ಪಗಳಿಂದಾಗಿ ‘ನಾಗವಾಪಿ’ ಎಂಬ ಹೆಸರು ಬಂದಿರಬಹುದು. ಕ್ರಿ.ಶ. ಒಂದನೇ ಶತಮಾನದಿಂದಲೂ ನಾಗಾವಿಯನ್ನು ವಿವಿಧ ರಾಜ ಮನೆತನಗಳು ಆಳುತ್ತಿದ್ದರೂ, ರಾಷ್ಟ್ರಕೂಟರ ಕಾಲದಲ್ಲಿ ಇದು ಪ್ರಮುಖ ಅಗ್ರಹಾರವಾಗಿತ್ತು. ಅಗ್ರಹಾರಗಳು, ಬ್ರಾಹ್ಮಣರ ವಸತಿ ನೆಲೆಗಳಲ್ಲದೆ, ಅವು ಶೈಕ್ಷಣಿಕ ಕೇಂದ್ರಗಳಾಗಿಯೂ ಕಾರ್ಯನಿರ್ವಹಿಸುತ್ತಿದ್ದವು. ನಾಗಾವಿಯಲ್ಲಿ ರಾಷ್ಟ್ರಕೂಟ ರಾಜರ ಆಳ್ವಿಕೆಯ ಸಮಯದಲ್ಲಿ, 400 ಮಹಾಜನರು (ವೈದಿಕ ಬ್ರಾಹ್ಮಣರು) ವಾಸವಾಗಿದ್ದರು ಮತ್ತು ಇದು ಶೈಕ್ಷಣಿಕ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿತ್ತು. 969 ರ ರಾಷ್ಟ್ರಕೂಟರ ಶಾಸನವು ನಾಗಾವಿಯಲ್ಲಿರುವ ರಾಮೇಶ್ವರ ದೇವಾಲಯಕ್ಕೆ ಸೇರಿದ ಸತ್ರ ಮತ್ತು ವಿದ್ಯಾಕೇಂದ್ರಕ್ಕಾಗಿ ನಿತ್ಯವರ್ಷ ಎಂಬುವರಿಂದ ಭೂಮಿ ದಾನ ಮಾಡಿರುವುದನ್ನು ದಾಖಲಿಸಿರುತ್ತದೆ.
ನಾಗಾವಿ ಶಾಸನಗಳು :
ಕ್ರಿ.ಶ. 11-13ನೇ ಶತಮಾನದ ಕಲ್ಯಾಣ ಚಾಲುಕ್ಯ ಅರಸರಾದ ತ್ರೈಲೋಕ್ಯಮಲ್ಲ ಸೋಮೇಶ್ವರ 1, ತ್ರಿಭುವನಮಲ್ಲ ವಿಕ್ರಮಾದಿತ್ಯ, ಆಹವಮಲ್ಲರ ಐದು ಸವಿವರವಾದ ಶಾಸನಗಳು ನಾಗಾವಿಯಲ್ಲಿ ದೊರೆತಿರುತ್ತವೆ. ಈ ಶಾಸನಗಳು ನಾಗಾವಿಯಲ್ಲಿ ಘಟಿಕಾಶತನ (ಉನ್ನತ ಶಿಕ್ಷಣ ಕೇಂದ್ರ) ಸ್ಥಾಪನೆ; ಅದನ್ನು ನಿರ್ಮಿಸಿದ ಮತ್ತು ಪೋಷಿಸಿರುವ ವ್ಯಕ್ತಿಗಳ ಹೆಸರು; ಕಲಿಕೆಯ ಪಠ್ಯಕ್ರಮ (Syllabus); ಅಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ; ವಿಷಯ ಪರಿಣಿತ ಅಧ್ಯಾಪಕರ ಸಂಖ್ಯೆ ಇತ್ಯಾದಿ; ಅವರಿಗೆ ನೀಡಲಾಗುತ್ತಿದ್ದ ಸಂಬಳ ಭತ್ಯೆಗಳು, ಗ್ರಂಥಾಲಯಗಳು, ಗ್ರಂಥಪಾಲಕರು (ಸರಸ್ವತಿ ಭಂಡಾರಿಗಳು) ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಸಮಯವನ್ನು ನೋಡಿಕೊಳ್ಳಲು ಮತ್ತು ನಿರ್ವಹಿಸಲು ನೇಮಿಸಿದ್ದ ಸಮಯಪಾಲಕರು (ಘಟಿಕಪ್ರಹಾರಿಗಳು) ಇತ್ಯಾದಿಗಳ ವಿವರಗಳನ್ನು ಉಲ್ಲೇಖಿಸಿರುತ್ತವೆ.
ನಾಗಾವಿ ಉನ್ನತ ಶಿಕ್ಷಣ ಕೇಂದ್ರವಾಗಿ (ಘಟಿಕಾಸ್ಥಾನ):
ನಾಗಾವಿಯಲ್ಲಿರುವ ವಿಶ್ವವಿದ್ಯಾಲಯವನ್ನು ಶಾಸನಗಳಲ್ಲಿ ‘ಘಟಿಕಾಸ್ಥಾನ’ ಎಂದು ಕರೆಯಲಾಗಿದೆ. ಇದು ಆಧುನಿಕ ಅರ್ಥದಲ್ಲಿ ಗಡಿಯಾರ ಎಂಬ ಅರ್ಥವನ್ನು ನೀಡುವ ‘ಘಟಕ’ ಎಂಬ ಪದದಿಂದ ಬಂದಿರುತ್ತದೆ. ವಿಶ್ವವಿದ್ಯಾನಿಲಯಗಳಲ್ಲಿ ನಡೆಯುವ ವಿದ್ವತ್ಪೂರ್ಣ ಚರ್ಚೆಗಳು, ವ್ಯಾಖ್ಯಾನಗಳು, ವ್ಯಾಖ್ಯಾನಕಾರರು (ವ್ಯಾಖ್ಯಾನಕರ್ತರು) ಮತ್ತು ಇತರ ಚರ್ಚೆಗಳಿಗೆ ಸಮಯವನ್ನು ನಿಗಧಿಪಡಿಸಲು ಮತ್ತು ನಿರ್ವಹಿಸಲು ಈ ಘಟಿಕಗಳನ್ನು ಘಟಿಕಾಸ್ಥಾನಗಳಲ್ಲಿ ಸ್ಥಾಪಿಸಲಾಗಿರುತ್ತದೆ. ಹಿಂದಿನ ಕಾಲದಲ್ಲಿ, ಸಮಯವನ್ನು ಅಳೆಯಲು ರಂಧ್ರವಿರುವ ಮಣ್ಣಿನ ಮಡಕೆಯಲ್ಲಿ ನೀರು ಅಥವಾ ಮರಳನ್ನು ತುಂಬಿಸಲಾಗುತ್ತಿತ್ತು. ಚರ್ಚೆಗಳು/ವ್ಯಾಕರಣಗಳ ಸಮಯವನ್ನು ಮಡಕೆಯಲ್ಲಿನ ಸೋರಿಕೆಯ ಪ್ರಮಾಣಕ್ಕೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ (ಘಟಿಕಗಳು),
ನಾಗಾವಿಯು ರಾಷ್ಟ್ರಕೂಟರ ಕಾಲದಲ್ಲಿ ನೂರು ಮಹಾಜನರ (ಬ್ರಾಹ್ಮಣ ವಿದ್ವಾಂಸರು) ಅಗ್ರಹಾರವಾಗಿತ್ತು. ಕ್ರಿ.ಶ.1058 ರ ಶಾಸನದಲ್ಲಿ ಕಲ್ಯಾಣ ಚಾಲುಕ್ಯ ರಾಜವಂಶದ ಒಂದನೇ ಸೋಮೇಶ್ವರನ ಅಧಿಕಾರಿ ಕನ್ನಡ ಸಂಧಿವಿಗ್ರಹಿ ಮಧುವಪ್ಪರಸನ ಮಗ ಕಾಳಿದಾಸಯ್ಯ ಇದನ್ನು ಘಟಿಕಾಸ್ಥಾನ (ವಿಶ್ವವಿದ್ಯಾಲಯ) ಎಂದು ಪರಿವರ್ತಿಸಿದನು ಮತ್ತು ಕಲ್ಯಾಣ ಚಾಲುಕ್ಯ ರಾಜನು ಅದರ ನಿರ್ವಹಣೆಗಾಗಿ ಭೂಮಿಯನ್ನು ನೀಡುವಂತೆ ಮಾಡಿದನು ಎಂದು ತಿಳಿದುಬಂದಿರುತ್ತದೆ.
ವಿದ್ಯಾರ್ಥಿಗಳ ಸಂಖ್ಯೆ:
ನಾಗಾವಿಯಲ್ಲಿ ಮುಖ್ಯವಾಗಿ ಮೂರು ಕ್ಯಾಂಪಸ್ಗಳಲ್ಲಿ ಶಿಕ್ಷಣವನ್ನು ನೀಡಲಾಗುತ್ತಿತ್ತು. ಅಲ್ಲಿ ಸುಮಾರು 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಇದು ಪದವಿ ಮತ್ತು ಸ್ನಾತಕೋತ್ತರ ಪದವಿಗಳೆರಡರ ವಿದ್ಯಾರ್ಥಿಗಳನ್ನು ಹೊಂದಿತ್ತು. ಪದವಿಪೂರ್ವ (ಪದವಿ) ವಿದ್ಯಾರ್ಥಿಗಳನ್ನು ‘ಮಠದ ಮಾಣಿʼ (ಮಠಕ್ಕೆ ಸೇರಿದ ವಿದ್ಯಾರ್ಥಿಗಳು) ಆದರೇ, ಘಟಿಕಸ್ಥಾನದಲ್ಲಿ (ವಿಶ್ವವಿದ್ಯಾಲಯ) ಓದುತ್ತಿರುವ ವಿದ್ಯಾರ್ಥಿಗಳನ್ನು ‘ಘಳಿಗೆಯ ಮಾಣಿ’ (ವಿಶ್ವವಿದ್ಯಾಲಯಕ್ಕೆ ಸೇರಿದ ವಿದ್ಯಾರ್ಥಿಗಳು) ಎಂದು ಕರೆಯಲಾಗುತ್ತಿತ್ತು.
ಒಂದು ಕ್ಯಾಂಪಸ್ನಲ್ಲಿ ಸುಮಾರು 400 ವಿದ್ಯಾರ್ಥಿಗಳಿದ್ದು, ಅವರಲ್ಲಿ 100 ಮಂದಿ ಶುಕ್ರನೀತಿ, 100 ವಿದ್ಯಾರ್ಥಿಗಳು ವ್ಯಾಸನೀತಿ. 100 ವಿದ್ಯಾರ್ಥಿಗಳು ಮನು ಧರ್ಮಶಾಸ್ತ್ರ ಮತ್ತು 100 ವಿದ್ಯಾರ್ಥಿಗಳು ಇತರ ವಿಷಯಗಳನ್ನು ಅಧ್ಯಯನ ಮಾಡುತ್ತಿದ್ದರು. ಎರಡನೇ ಕ್ಯಾಂಪಸ್ನಲ್ಲಿ 200 ವಿದ್ಯಾರ್ಥಿಗಳು ಮತ್ತು ಮೂರನೇ ಕ್ಯಾಂಪಸ್ನಲ್ಲಿ 52 ವಿದ್ಯಾರ್ಥಿಗಳು ಇದ್ದರು. ಇಲ್ಲಿ, ಪ್ರಸಿದ್ಧ ಪ್ರಾಚೀನ ನಳಂದ ವಿಶ್ವವಿದ್ಯಾಲಯವನ್ನು ಹೋಲುವ ಮೂರು ಅಥವಾ ನಾಲ್ಕು ಪ್ರತ್ಯೇಕ ಕ್ಯಾಂಪಸ್ಗಳು ಇದ್ದಿರಬಹುದು ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿರುತ್ತಾರೆ.
ನಾಗಾವಿ ಘಟಿಕಾಸ್ಥಾನದಲ್ಲಿ ಕಲಿಸಲಾಗುತ್ತಿದ್ದ ವಿಷಯಗಳು:
ಪ್ರಾಚೀನ ಕರ್ನಾಟಕದಲ್ಲಿ ಕನ್ನಡ ಅಕ್ಷರ ಶಿಕ್ಷಣ, ಬಾಲ ಶಿಕ್ಷಣ. ಕರ್ನಾಟಕ ಶಿಕ್ಷಣ, ಕನ್ನಡ ವರ್ಣಮಾಲೆ, ಭಾಷೆ, ವ್ಯಾಕರಣಗಳನ್ನು ಪ್ರಾಥಮಿಕ ಶಿಕ್ಷಣವಾಗಿ ಕಲಿಸಲಾಗುತ್ತಿತ್ತು. ನಾಗಾವಿಯು ಉನ್ನತ ಶಿಕ್ಷಣ ಕೇಂದ್ರವಾಗಿದ್ದರಿಂದ, ವೇದ, ವೇದಾಂಗಗಳು, ಉಪನಿಷತ್ತುಗಳು, ಭಟ್ಟದರ್ಶನ (ಕುಮಾರಿಳ ಭಟ್ಟ ದರ್ಶನ), ನ್ಯಾಸ (ವ್ಯಾಕರಣ), ಪ್ರಭಾಕರ ದರ್ಶನ, ಶುಕ್ರನೀತಿ ಮತ್ತು ಇತರ ವಿಷಯಗಳು ಅಲ್ಲಿ ಕಲಿಸಲಾಗುತ್ತಿತ್ತು. ನೀತಿಶಾಸ್ತ್ರ, ಧರ್ಮಶಾಸ್ತ್ರ, ವ್ಯಾಸನೀತಿ ಮುಂತಾದ ತಾತ್ವಿಕ ಮತ್ತು ಗಂಭೀರ ವಿಷಯಗಳನ್ನು ಕಲಿಸಲಾಗುತ್ತಿತ್ತು ಹಾಗೂ ವಿವರಿಸಲಾಗುತ್ತಿತ್ತು. ಈ ಎಲ್ಲಾ ವಿಷಯಗಳನ್ನು ಕಲಿಸಲು ಪ್ರತಿ ವಿಷಯಕ್ಕೂ ಪ್ರತ್ಯೇಕ ವಿಷಯ ತಜ್ಞರು ಮತ್ತು ವ್ಯಾಖ್ಯಾನಕಾರರು ಇದ್ದರು. ಅವರೆಲ್ಲರಿಗೂ ಸುಸ್ಥಿರ ಭತ್ಯೆಗಳಾಗಿ ಭೂಮಿಯನ್ನು ನೀಡಲಾಗಿರುತ್ತದೆ.
ಗ್ರಂಥಾಲಯ:
ನಾಗಾವಿಯು ಆರು ಸರಸ್ವತಿ ಭಂಡಾರಿಗಳ (ಗ್ರಂಥಪಾಲಕರು)ನ್ನು ಒಳಗೊಂಡಂತೆ, ಹಸ್ತಪ್ರತಿಗಳು (ತಾಳೆ ಗರಿಗಳು) ಮತ್ತು ಸಾಹಿತ್ಯ ಕೃತಿಗಳ ಬೃಹತ್ ಗ್ರಂಥಾಲಯವನ್ನು ಹೊಂದಿತ್ತು ಇದು ಗ್ರಂಥಾಲಯದ ಮಹತ್ವ ಮತ್ತು ವ್ಯಾಪ್ತಿಯನ್ನು ಸೂಚಿಸುತ್ತದೆ.
ಘಟಿಕಾ (ಸಮಯ) ನಿರ್ವಾಹಕರು:
ಘಟಿಕಾಸ್ಥಾನಗಳಲ್ಲಿ ‘ಘಟಿಕ’ಗಳನ್ನು (ಗಡಿಯಾರಗಳು) ಅಳವಡಿಸುವುದು ಕಡ್ಡಾಯವಾಗಿತ್ತು. ಕರ್ನಾಟಕದ ಹಲವಾರು ಶಾಸನಗಳಲ್ಲಿ ಶಿಕ್ಷಣ ಕೇಂದ್ರಗಳಿಗೆ ಘಟಿಕಗಳನ್ನು ದಾನ ಮಾಡಿದ ಬಗ್ಗೆ ಉಲ್ಲೇಖಗಳಿವೆ. ನಾಗಾವಿಯು ಘಟಿಕ ಯಂತ್ರದಲ್ಲಿ ಸಮಯವನ್ನು ನಿಗಾ ಇಡಲು ಘಟಿಕ ಪ್ರಹರಿ (ಸಮಯದ ಘೋಷಕರು) ಮತ್ತು ಕಪಿನ ಘಾಟಿಯಾರಿಗಳನ್ನು (ಘಟಿಕಾ ನಿರ್ವಾಹಕರು) ನೇಮಕಮಾಡಲಾಗಿತ್ತು ಮತ್ತು ಅವರು ವ್ಯಾಖ್ಯಾನಕಾರರು (ವ್ಯಾಕ್ಯನಕರ್ತರು) (ವಿಷಯ ತಜ್ಞರು) ಗಳಿಗೆ ಸಮನಾದ ಭೂ ಅನುದಾನವನ್ನು ಹೊಂದಿದ್ದರು.
ನಾಗಾವಿಯಲ್ಲಿ ವಿಶ್ವವಿದ್ಯಾಲಯ ಕಟ್ಟಡಗಳು:
ಅರವತ್ತು ಕಂಬಗಳ ದೇವಾಲಯ:
ಇಂದು ನಾಗಾವಿ ಪ್ರಾಚೀನ ಅವಶೇಷಗಳ ನಗರವಾಗಿದೆ. ಆದಾಗ್ಯೂ, ಶಾಸನಗಳಲ್ಲಿ ಉಲ್ಲೇಖಿಸಲಾದ ಎಲ್ಲಾ ಅಂಶಗಳ ಜೊತೆಗೆ, ವಿಶ್ವವಿದ್ಯಾಲಯದ ಕೆಲವು ಕಟ್ಟಡಗಳ ಅವಶೇಷಗಳು ಇಂದಿಗೂ ನಾಗಾವಿಯಲ್ಲಿ ಉಳಿದುಕೊಂಡಿವೆ. ಅಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರ ತ್ರಿಪುರುಷ ದೇವಾಲಯವಿದೆ (ಈಗ ದೇವಾಲಯದ ಒಳಗೆ 60 ಕಂಬಗಳು ಇರುವುದರಿಂದ ಇದನ್ನು 60 ಕಂಬಗಳ ದೇವಾಲಯ ಎಂದು ಕರೆಯಲಾಗುತ್ತಿದೆ). ಶಾಸನಗಳಲ್ಲಿ ಇದನ್ನು ತ್ರಿಪುರುಷ ಶಾಲೆ ಎಂದು ಉಲ್ಲೇಖಿಸಲಾಗಿದೆ, ಇದರಲ್ಲಿ ವಿವಿಧ ಪಂಗಡಗಳಿಗೆ ಸೇರಿದ ಎಲ್ಲಾ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಅವಕಾಶವಿತ್ತು. ಕಟ್ಟಡದ ಒಳಗೆ ತೆರೆದ ಪ್ರಾಂಗಣವಿದ್ದು, ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಕಟ್ಟಡದ ಒಳಗೆ ನಿಂತು ನೋಡಿದರೆ ಇಡೀ ಆವರಣವೇ ಗೋಚರಿಸುತ್ತದೆ. ಕಟ್ಟಡದ ಮಧ್ಯದಲ್ಲಿ ತೆರೆದ ಚಾವಣಿ ಮೂಲಕ ವಾತಾಯನಕ್ಕೆ (ಗಾಳಿಯ ಹರಿಯುವಿಕೆಗೆ) ವ್ಯವಸ್ಥೆ ಮಾಡಲಾಗಿರುತ್ತದೆ ಮತ್ತು ಮಳೆಯ ಸಂದರ್ಭದಲ್ಲಿ ಮಳೆ ನೀರಿನ ಹರಿವಿಗೆ ಸೂಕ್ತ ವ್ಯವಸ್ಥೆಯನ್ನೂ ಮಾಡಲಾಗಿರುತ್ತದೆ
ಮಧುಸೂದನ ದೇವಸ್ಥಾನ ಸಂಕೀರ್ಣ:
ನಾಗಾವಿಯಲ್ಲಿರುವ 60 ಕಂಬಗಳ ದೇವಾಲಯದಿಂದ 1 ಕಿಲೋ ಮೀಟರ್ ದೂರದಲ್ಲಿ, ಅವಶೇಷಗಳು ಹರಡಿ ಕೊಂಡಿರುವ ವಿಶಾಲವಾದ ಜಾಗವಿದೆ. ಇದನ್ನು ಮಧುಸೂದನ ದೇವರ ದೇವಾಲಯ ಸಂಕೀರ್ಣ ಎಂದು ಗುರುತಿಸಲಾಗಿದೆ. ಶಿಥಿಲಗೊಂಡ ಮಧುಸೂಧನ ದೇವಾಲಯದ ಆವರಣದಲ್ಲಿರುವ ಎರಡು ದೊಡ್ಡ ಶಾಸನಗಳ ಆಧಾರದ ಮೇಲೆ, ಆ ಸಂಕೀರ್ಣವು ದೊಡ್ಡ ಮತ್ತು ವಿಶಾಲವಾದ ಶಿಕ್ಷಣ ಸಂಸ್ಥೆಯನ್ನು ಹೊಂದಿತ್ತು, ಅಲ್ಲಿ ಬಹುಶಃ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆಯನ್ನು ಮಾಡಲಾಗಿದ್ದಿತು ಎಂದು ತಿಳಿದು ಬಂದಿರುತ್ತದೆ. ಇದು ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿದೆ ಮತ್ತು ಮಧುಸೂದನ ದೇವಸ್ಥಾನದ ಮುಂಭಾಗ ಮತ್ತು ಹಿಂಭಾಗದ ಕಟ್ಟಡಗಳ ಅಧಿಷ್ಠಾನದ ಭಾಗಗಳು ಇಂದಿನವರೆಗೂ ಕಂಡುಬರುತ್ತಿವೆ. ಮಧುಸೂದನ ದೇವಸ್ಥಾನವು ಗರ್ಭಗುಡಿ, ಅಂತರಾಳ, ನವರಂಗಗಳನ್ನು ಒಳಗೊಂಡಿದೆ, ನವರಂಗ ಮತ್ತು ನಂದಿ ಮಂಟಪದ ನಡುವೆ ಎರಡು ಪ್ರವೇಶದ್ವಾರಗಳಿವೆ. ಇತ್ತೀಚೆಗೆ ನಿಧಿಗಳ್ಳರಿಂದ ಗರ್ಭಗುಡಿ ಧ್ವಂಸಗೊಂಡಿರುತ್ತದೆ.
ಮಧುಸೂದನ ದೇವಾಲಯವನ್ನು ಕಾಳಿದಾಸ ದಂಡನಾಯಕನು ತನ್ನ ತಂದೆ ಮಧುವರಸನ ಹೆಸರಿನಲ್ಲಿ ನಿರ್ಮಿಸಿರುತ್ತಾನೆ. ಮಧುಸೂದನ ದೇವಸ್ಥಾನದ ಘಟಿಕಾಸ್ಥಾನವು ಕೇವಲ ವೇದ, ವೇದಾಂಗ, ಮೀಮಾಂಸೆಗಳ ಅಧ್ಯಯನಕ್ಕೆ ಸೀಮಿತವಾಗಿರದೇ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆಯಾಗಿ ತನ್ನ ಚಟುವಟಿಕೆಗಳನ್ನು ವಿಸ್ತರಿಸಿಕೊಂಡಿರುತ್ತದೆ. ಏಕದಂಡಿ, ತ್ರಿದಂಡಿ, ಸನಾತಕ, ಬ್ರಹ್ಮಚಾರಿ, ಹಂಸ, ಪರಮಹಂಸ, ಅನುಷ್ಟಾನ ಹಾಗೂ ವೇದ, ವೇದಾಂಗ ಅಧ್ಯಯನ ವಿದ್ಯಾರ್ಥಿಗಳು ಇದ್ದರು. ಪ್ರತಿಯೊಂದು ತರಗತಿಗೂ ಪ್ರತ್ಯೇಕ ಅಧ್ಯಯನ ಕೇಂದ್ರ ಮತ್ತು ಪ್ರತ್ಯೇಕ ಅಧ್ಯಾಪಕರು ಇರುತ್ತಿದ್ದರು. ಲಲಿತಕಲೆಗಳಿಗೂ ಅವಕಾಶವಿತ್ತು. ದೇವಾಲಯದಲ್ಲಿ ಲಲಿತಕಲೆಗಳ ಪ್ರದರ್ಶನದ ಅಂಗವಾಗಿ ಅಂಗಭೋಗ, ರಂಗಭೋಗ ಸೇವೆಗಳು (ಚಾಮರ ಮತ್ತು ಉತ್ಸವ ಸೇವೆ), ಸಂಗೀತ ಮತ್ತು ಇತರ ಸೇವೆಗಳು ಇದ್ದವು ಎಂದು ಶಾಸನಗಳಿಂದ ತಿಳಿದುಬರುತ್ತದೆ.
ಮಧುಸೂದನ ದೇವಸ್ಥಾನದ ಹಿಂದೆ ಇನ್ನೊಂದು ಶಿಥಿಲ ಮಂಟಪವಿದೆ. ಇದು ಸಾಕಷ್ಟು ವಿಶಾಲವಾದ ಪ್ರಾಂಗಣವನ್ನು ಸಹ ಹೊಂದಿದೆ. ಬಲ ಮತ್ತು ಎಡಭಾಗದಲ್ಲಿ ಕೊಠಡಿಗಳಿವೆ, ಅದರೊಳಗೆ ಕಲ್ಲಿನ ಬೆಂಚುಗಳ ದೊಡ್ಡ ಹಜಾರ (ಹಾಲ್) ಇದ್ದು ಅಧ್ಯಯನ ಕಾರ್ಯಕ್ಕೆ ಸಾಕಷ್ಟು ವಿಶಾಲವಾಗಿರುತ್ತದೆ.
ಮಲ್ಲಿಕಾರ್ಜುನ ದೇವಾಲಯ ಸಂಕೀರ್ಣ:
ಮಧುಸೂದನ ದೇವಾಲಯದ ಸಂಕೀರ್ಣದಿಂದ ಸುಮಾರು 300 ಮೀಟರ್ ದೂರದಲ್ಲಿ, ರೇಖಾ ನಾಗರ ಶೈಲಿಯ ಶಿಖರಗಳೊಂದಿಗೆ ಅವಳಿ ಗರ್ಭಗುಡಿಯನ್ನು ಒಳಗೊಂಡಿರುವ ಮಲ್ಲಿಕಾರ್ಜುನ ದೇವಾಲಯ ಸಂಕೀರ್ಣವಿದೆ. ಅವುಗಳ ಪಕ್ಕದಲ್ಲಿ, ಸಣ್ಣ ಕೊಠಡಿಗಳ ರೂಪದಲ್ಲಿ ಕಟ್ಟಡಗಳ ಹಲವಾರು ಅವಶೇಷಗಳಿವೆ. ಇವು ವಿದ್ಯಾರ್ಥಿ ನಿಲಯಗಳಾಗಿರಬಹುದೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆ ಹೇಳುವುದಾದರೆ, ನಾಗಾವಿ ಘಟೈಕಸ್ಥಾನ (ವಿಶ್ವವಿದ್ಯಾಲಯ) ಸಂಕೀರ್ಣವು 400 ಎಕರೆಗೂ ಹೆಚ್ಚು ವಿಸ್ತಾರವಾದ ಪ್ರದೇಶದಲ್ಲಿ ಹರಡಿಕೊಂಡಿದೆ, ಇದು ಬೃಹತ್ ವಿಶ್ವವಿದ್ಯಾಲಯ ಸಂಕೀರ್ಣವಾಗಿತ್ತು ಎಂಬ ಅಂಶವನ್ನು ಖಚಿತಪಡಿಸುತ್ತದೆ.
ಮೇಲೆ ಹೇಳಿದ ಸಂಗತಿಗಳಿಂದ ನಾಗಾವಿಯಲ್ಲಿನ ಶಿಕ್ಷಣ ಪದ್ಧತಿಯ ಅಂಶಗಳನ್ನು ಈ ಕೆಳಗಿನಂತೆ ಸಂಕ್ಷೇಪಿಸಬಹುದಾಗಿದೆ:-
- ರಾಷ್ಟ್ರಕೂಟರ ಆಳ್ವಿಕೆಯಲ್ಲಿಯೂ ನಾಗಾವಿ ಪ್ರಸಿದ್ಧ ಕಲಿಕೆಯ ಕೇಂದ್ರವಾಗಿತ್ತು.
- ಕಲ್ಯಾಣ ಚಾಲುಕ್ಯ ರಾಜ ಒಂದನೇ ತ್ರೈಲೋಕ್ಯಮಲ್ಲ ಸೋಮೇಶ್ವರನ ಅಧಿಕಾರಿಯಾದ ಕನ್ನಡ ಸಂಧಿವಿಗ್ರಹಿ ಮಧುಸೂದನನ ಮಗನಾದ ಕಾಳಿದಾಸಯ್ಯನು ಅಗ್ರಹಾರವನ್ನು ಪರಿವರ್ತಿಸುವ ಮೂಲಕ ನಾಗಾವಿಯಲ್ಲಿ ಘಟಿಕಸ್ಥಾನ (ವಿಶ್ವವಿದ್ಯಾಲಯ) ಎಂಬ ಉನ್ನತ ಶಿಕ್ಷಣ ಕೇಂದ್ರವನ್ನು ಸ್ಥಾಪಿಸಿದನು.
- ಸುಮಾರು ಮೂರು ಕ್ಯಾಂಪಸ್ ಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರು.
- ಪ್ರತಿಯೊಂದು ವಿಷಯಕ್ಕೂ ಪ್ರತ್ಯೇಕ ವ್ಯಾಖ್ಯಾನಕಾರರು (ವ್ಯಾಕ್ಯಕರ್ತರು) ಇದ್ದರು, ಅವರಿಗೆ ಅವರ ಜೀವನೋಪಾಯಕ್ಕಾಗಿ ಭೂಮಿಯನ್ನು ನೀಡಲಾಗಿತ್ತು.
- ಸುಸಜ್ಜಿತ ಗ್ರಂಥಾಲಯವಿತ್ತು ಮತ್ತು ಗ್ರಂಥಾಲಯವನ್ನು ನಿರ್ವಹಿಸಲು ಮತ್ತು ನೋಡಿಕೊಳ್ಳಲು ಆರು ಸರಸ್ವತಿ ಭಂಡಾರಿಗಳನ್ನು (ಗ್ರಂಥಪಾಲಕರು) ನೇಮಿಸಲಾಗಿತ್ತು.
- ಗಡಿಯಾರಗಳನ್ನು ನಿರ್ವಹಿಸಲು ಮತ್ತು ಘಟಿಕಸ್ಥಾನದಲ್ಲಿ ಸಮಯವನ್ನು ಹೇಳಲು ನಾಲ್ಕು ಘಟಿಕ ಪ್ರಹರಿಗಳು (ಸಮಯ ಪಾಲಕರು) ಇದ್ದರು, ಅವರಿಗೆ ಬೋಧನಾ ಸಿಬ್ಬಂದಿಯೊಂದಿಗೆ ದತ್ತಿಗಳನ್ನು ಸಹ ನೀಡಲಾಗಿದ್ದಿತು.
- ನಾಗಾವಿಯಲ್ಲಿ ಇಂದಿಗೂ ಉಳಿದಿರುವ ಕಟ್ಟಡಗಳು, ಅವಶೇಷಗಳು, ಶಾಸನಗಳು ಪ್ರಾಚೀನ ಭಾರತದಲ್ಲಿ ನಳಂದ ವಿಶ್ವವಿದ್ಯಾಲಯಕ್ಕೆ ಸಮಾನವಾಗಿ ಪ್ರಸಿದ್ಧವಾದ ಬೃಹತ್ ವಿಶ್ವವಿದ್ಯಾಲಯವಿತ್ತು ಎಂಬ ಅಂಶವನ್ನು ದೃಢಪಡಿಸುತ್ತವೆ.
In the News
Karnataka Government Plans to Rejuvenate Historic Educational Hub Nagavi
Nagavi University ಸಂರಕ್ಷಣೆಗಾಗಿ ಸಮಿತಿ: ನಳಂದ ವಿವಿಗಿಂತಲೂ ಹಳೆಯದು?
Seven private parties to adopt and restore monuments in Karnataka
Development of ancient monuments, ecotourism takes centre stage
Development of ancient monuments, ecotourism takes centre stage
Major focus is on improving basic facilities in tourist destinations in Karnataka, says Tourism Minister H. K. Patil
